ಪರಿವಾರ ದೇವತೆಗಳು ಮತ್ತು ದೈವಗಳು
ಶ್ರೀ ಮಹಾಗಣಪತಿ
ಶ್ರೀ ಮಹಾಗಣಪತಿ ದೇವಳವು ಮುಖ್ಯ ದೇವಸ್ಥಾನದ ಒಳಾಂಗಣದಲ್ಲಿ ನೈರುತ್ಯ ಭಾಗದಲ್ಲಿದ್ದು ಪ್ರತ್ಯೇಕ ಗುಡಿಯನ್ನು ಹೊಂದಿರುತ್ತದೆ. ಶ್ರೀ ಗಣಪತಿ ದೇವರಿಗೆ ಗಣಹೋಮ, ಸಂಕಷ್ಟಚತುರ್ಥಿ ಪೂಜೆ, ಅಪ್ಪದ ಪೂಜೆ, ಕಜ್ಜಾಯ ಹರಕೆಯಾಗಿ ನಡೆಸಲ್ಪಡುತ್ತದೆ.
ವ್ಯಾಘ್ರಚಾಮುಂಡಿ
ವ್ಯಾಘ್ರಚಾಮುಂಡಿ, ಶ್ರೀಕ್ಷೇತ್ರದ ಮತ್ತು ಊರಿನ ಪ್ರಧಾನ ದೈವ. ತುಳುವಿನಲ್ಲಿ ರಾಜನ್‍ದೈವ ಎಂದು ಮನ್ನಣೆಯನ್ನು ಪಡೆದಿರುವ ಈಕೆ ದೇವಾಸ್ಥಾನದ ಆಗ್ನೇಯ ದಿಕ್ಕಿನಲ್ಲಿದ್ದು ಭಕ್ತಾಭೀಷ್ಟಪ್ರದಾಯಕಿಯಾಗಿದ್ದಾಳೆ. ನಿತ್ಯ ಪೂಜೆಯೊಂದಿಗೆ ಶುಕ್ರವಾರದಂದು ಹೂವಿನ ಪೂಜೆ, ಅಗೆಲುಸೇವೆ ಹರಕೆಯಾಗಿ ಸಲ್ಲಿಸಲ್ಪಡುತ್ತವೆ. ವಾರ್ಷಿಕ ಉತ್ಸವದ ಸಮಯ ಶ್ರೀ ದೇವರ ಚೂರ್ಣೋತ್ಸವದ ಸಂದರ್ಭ, ಊರವರ ಸಮ್ಮುಖದಲ್ಲಿ ದರ್ಶನ ಪಾತ್ರಿಯ ಮೈಮೇಲೆ ವ್ಯಾಘ್ರಚಾಮುಂಡಿಯನ್ನು ಆಹ್ವಾನಿಸಿದಾಗ ಶ್ರೀ ದೇವರ ಭೇಟಿಗೆ ತೆರೆಳುವ ವ್ಯಾಘ್ರಚಾಮುಂಡಿ ಮಹಾಪ್ರಸಾದದೊಂದಿಗೆ ಭಕ್ತಾದಿಗಳನ್ನು ಹರಸುವುದು ಅನುಚಾನವಾಗಿ ನಡೆದುಕೊಂಡು ಬರುತ್ತಿದೆ. ಹಾಗೆಯೇ ಧ್ವಜಾವರೋಹಣದ ಮಾರನೇ ದಿವಸ ವ್ಯಾಘ್ರಚಾಮುಂಡಿ ನೇಮೋತ್ಸವವು ವಿಜೃಂಭಣೆಯಿಂದ ನಡೆಯುತ್ತದೆ. ಇದಲ್ಲದೆ ಧೂಮಾವತಿ, ರಕ್ತೇಶ್ವರಿ, ಕಾಂತರಧೂಮಾವತಿ, ಬಂಟ, ವ್ಯಾಘ್ರಚಾಮುಂಡಿ ಬಂಟ, ಸರಳಧೂಮಾವತಿ ಎಂಬ ಇತರ ಆರು ದೈವಗಳು ಪೂಜಿಸಲ್ಪಟ್ಟು ನೇಮೋತ್ಸವ ನಡೆಯುತ್ತದೆ.
ಮಹರ್ಷಿ ಜಾಬಾಲಿ
ದೇವಸ್ಥಾನದ ಹೊರಾಂಗಣದ ಉತ್ತರ ದಿಕ್ಕಿನಲ್ಲಿ ವೃಂದಾವನ ಸ್ವರೂಪದಲ್ಲಿ ಮಹರ್ಷಿ ಜಾಬಾಲಿಯು ಕಂಗೊಳಿಸುತ್ತಿದ್ದಾರೆ. ಅಲ್ಲದೆ ಈ ವೃಂದಾವನದ ಇತರ ಮೂರು ದಿಕ್ಕುಗಳಲ್ಲಿ ಅವರ ಆರಾಧ್ಯ ದೇವರುಗಳಾದ ಶ್ರೀ ಮಹಾಗಣಪತಿ, ಪಾರ್ವತಿ, ಮಹೇಶ್ವರರು ಪೂಜಿಸಲ್ಪಡುತ್ತಿದ್ದು ಬಹಳ ಕಾರಣೀಕದ ಪೀಠವಾಗಿದೆ. ಗುಹೆಯೊಳಗೆ ತೀರ್ಥಸ್ನಾನ ಮಾಡಿ ಜಾಬಾಲೇಶ್ವರನನ್ನು ಅರ್ಚಿಸಿ ಮಹರ್ಷಿಗಳ ಸನ್ನಿಧಾನದಲ್ಲಿ ಫಲಸಮರ್ಪಣೆ ಮಾಡಿ, ಪ್ರಾರ್ಥಿಸಿಕೊಂಡಾಗ ಮನಸ್ಸಿನಲ್ಲಿ ಇಚ್ಚಿಸಿದ ಕಾರ್ಯವು ಕ್ಷಿಪ್ರವಾಗಿ ಈಡೇರುತ್ತಿರುವುದು ಇಲ್ಲಿಯ ಸ್ಥಳ ವಿಶೇಷ.
ಮಹರ್ಷಿ ಜಾಬಾಲಿಗಳು ಕಾಶೀ ವಿಶ್ವನಾಥನ ಸನ್ನಿಧಿಯಿಂದ ಬಂದು ಅಂದು ಬಿಲ್ವ ವನವೆಂದು ಪ್ರಸಿದ್ಧಿಯಾದ (ನಿರ್ಜರಾರಣ್ಯ - ಕಟೀಲು ಕ್ಷೇತ್ರ) ನೆಲ್ಲಿತೀರ್ಥದ ಗುಹೆಯಲ್ಲಿ ತಪಸ್ಸನ್ನಾಚರಿಸಿ ಜನರ ಕಷ್ಟಸುಖಗಳಿಗೆ ಸ್ಪಂದಿಸಿ ನಂದಿನಿಯನ್ನು ನದಿಯಾಗಿ ಹರಿಸಿ ಈ ಪ್ರದೇಶದ ಕ್ಷಾಮ ಡಾಮರಗಳನ್ನು ಪರಿಹರಿಸಿ ಮುಂದಕ್ಕೆ ಅರುಣಾಸುರ ವಧೆಗೆ ಕಾರಣೀಭೂತರಾದ ಮಹಾಮಹಿಮರು ಇವರು. ಇಂದಿಗೂ ಗುಹೆಯಲ್ಲಿ ತಪಸ್ಸನ್ನಾಚರಿಸುತ್ತ ಭಕ್ತರ ಇಷ್ಟಾರ್ಥವನ್ನು ಈಡೇರಿಸುವ ಕಾಮಧೇನುವಾಗಿದ್ದಾರೆ ಎಂಬುದು ಹಿಂದಿನಿಂದ ಬಂದ ನಂಬಿಕೆ.
ಕ್ಷೇತ್ರಪಾಲ - ಕ್ಷೇತ್ರ ಉಲ್ಲಾಯ
ದೇವಸ್ಥಾನದ ಮುಂಭಾಗದಲ್ಲಿ ಇರುವ ದೈವಕ್ಷೇತ್ರ ಉಲ್ಲಾಯ. ಕ್ಷೇತ್ರರಕ್ಷಕನಾದ ಈತನಿಗೆ ಅವಭೃತ (ಆರಾಟ) ದಿವಸ ವಿಶಿಷ್ಟ ರೀತಿಯ ನೇಮೋತ್ಸವ ನಡೆಯುತ್ತದೆ. ವಿಚಿತ್ರ ಸಂಪ್ರದಾಯದಿಂದ ಕೂಡಿದ ಈ ನೇಮವು ಮಹಾರಾಜನು ಅಧಿಕಾರಿಗಳನ್ನು ಪ್ರಶ್ನಿಸುವ ರೀತಿಯಲ್ಲಿ ಇದ್ದು, ಆತನ ವೇಷಭೂಷಣಗಳು ಇದನ್ನು ಪುಷ್ಟೀಕರಿಸುತ್ತವೆ. ಮುಖದಲ್ಲಿ ಮೀಸೆಯನ್ನು ಹೊತ್ತು ಧನುರ್ಧಾರಿಯಾಗಿ ದೇವರು ಸ್ನಾನಮಾಡಿ ವಿಜೃಂಭಣೆಯಿಂದ ಬರುತ್ತಿರುವಾಗ ಅರ್ಧದಲ್ಲಿ ಅಡ್ಡಗಟ್ಟಿ, ತಂತ್ರಿಗಳನ್ನು ಅಧಿಕಾರಯುತವಾಗಿ ಕೇಳುವ ಮಾತುಗಳು ಬಹುಶಃ ದಕ್ಷಿಣ ಕನ್ನಡದಲ್ಲಿಯೇ ವಿಶಿಷ್ಟ ರೀತಿಯದ್ದಾಗಿದೆ. ’ ತಂತ್ರಿಗಳೇ, ನನ್ನ ದೇವರ ಮೂರು ದಿವಸದ ದೇವಬಲಿ, ಒಂದು ದಿವಸದ ಶ್ರೀ ಭೂತಬಲಿ, ಆರಡ ಅಂಬೋಲಿ ಸರಿಯಾಗಿ ನೆರೆವೇರಿತು ತಾನೆ? ಎರಡು ಪ್ರಶ್ನೆ ಶ್ರೀ ದೇವರ ಅಂದರೆ ನನ್ನ ಉಲ್ಲಾಯ ಒಡೆಯನ ನಿತ್ಯ ಬಲಿ, ನಂದಾದೀಪ ಸಾಂಗವಾಗಿ ನೆರವೇರುತ್ತಾ ಇದೆ ತಾನೆ? ಹಾಗಿದ್ದ ಪಕ್ಷದಲ್ಲಿ ಧ್ವಜಾವರೋಹಣವಾಗಲಿ ಮತ್ತು ನನ್ನ ಒಡೆಯ ಗರ್ಭಗುಡಿ ಪ್ರವೇಶಿಸಲಿ, ನಾನು ನನ್ನ ಗುಡಿ ಸೇರುತ್ತೇನೆ’ ಎನ್ನುತ್ತಾ ಧರಾಶಾಯಿಯಾಗುತ್ತಾನೆ. ಅಲ್ಲಿಗೆ ನೇಮ ಸಮಾಪ್ತಿ.
ನಾಗಬ್ರಹ್ಮರು ಮತ್ತು ದೈವಗಳು
ದೇವಸ್ಥಾನದಿಂದ ವಾಯವ್ಯ ದಿಕ್ಕಿಗೆ ಸುಮಾರು ೨ ಫರ್ಲಾಂಗ್ ದೂರದಲ್ಲಿ ಕಾಡಿನ ಮಧ್ಯೆ ನಾಗಬ್ರಹ್ಮ ಹಾಗೂ ಪರಿವಾರ ದೈವಗಳ ಸಾನ್ನಿಧ್ಯವಿದ್ದು ಜೀರ್ಣೋದ್ಧಾರದ ಹಂತದಲ್ಲಿದೆ. ವರ್ಷಕ್ಕೆ ಎರಡಾವರ್ತಿ ವಾರ್ಷಿಕ ಪೂಜೆಗಳು ನಡೆಯುತ್ತಿದ್ದು, ಬಹಳ ಕಾರಣಿಕ ಸ್ಥಳವಾಗಿರುತ್ತದೆ. ಈ ಸನ್ನಿಧಾನದಲ್ಲಿ ವಾರಾಹಿ, ರಕ್ತೇಶ್ವರಿ, ನಂದಿಗೋಣ, ಕ್ಷೇತ್ರಪಾಲ, ಬೊಬ್ಬರ್ಯ, ಪಾಶಾಣಮೂರ್ತಿ ಎಂಬ ಆರು ದೈವಗಳ ಸಾನ್ನಿಧ್ಯವಿದ್ದು ಇವುಗಳ ಮಧ್ಯೆ ನಾಗಬ್ರಹ್ಮರು ರಾರಾಜಿಸುತ್ತಿದ್ದಾರೆ.